ಹೊಸದಿಲ್ಲಿ: ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಭಾರತದಲ್ಲಿ ವಿಶೇಷವಾಗಿ ಪ್ರಮುಖ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿನ ಕಾನೂನು ಶಿಕ್ಷಣದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು livelaw.in ವರದಿ ಮಾಡಿದೆ.

National Law Institute University ಆಯೋಜಿಸಿದ್ದ ಎರಡನೇ NLIU SBA ಕಾನೂನು ಸಮ್ಮೇಳನದಲ್ಲಿ ಮಾತನಾಡಿದ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ, ಎನ್ ಎಲ್‌ಯು ಸಂಸ್ಥೆ ಪ್ರತಿಭಾನ್ವಿತರನ್ನು ರೂಪಿಸುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಆದರೆ, ಸಮಸ್ಯೆಯೇನೆಂದರೆ ಅವರು ವೇಗವಾಗಿ ಕೋಟ್ಯಾಧಿಪತಿಗಳಾಗುವ ಅಂತಿಮ ಗುರಿಯೊಂದಿಗೆ ಪದವಿ ಪಡೆಯುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ತಮ್ಮ ಸಾಂಸ್ಕೃತಿಕ ಮತ್ತು ತಾತ್ವಿಕ ವಿಚಾರಗಳೊಂದಿಗೆ ಸಂಪರ್ಕವನ್ನು ಕಳೆದುಕೊಂಡಿರುತ್ತಾರೆ ಎಂದು ಹೇಳಿದರು.

ಎಲ್ಲಾ ಕಾನೂನು ವಿದ್ಯಾರ್ಥಿಗಳಿಗೆ ಜೈನ ಧರ್ಮ, ಬೌದ್ಧ ಧರ್ಮ, ಮನುಸ್ಮೃತಿ ಮತ್ತು ಅರ್ಥಶಾಸ್ತ್ರದ ತತ್ವಗಳು ಮತ್ತು ಅವುಗಳ ಪರಸ್ಪರ ಸಂಬಂಧವನ್ನು ಕಲಿಸಬೇಕು. ಇದರಿಂದ ವಿದ್ಯಾರ್ಥಿಗಳ ಚಿಂತನೆಯಲ್ಲಿ ಸ್ಥಿರತೆ ಮತ್ತು ಪ್ರಬುದ್ಧತೆ ಬರುತ್ತದೆ. ನಮ್ಮ ಕರ್ತವ್ಯಗಳು ಮತ್ತು ಕರ್ಮದ ಬಗ್ಗೆ ಜಾಗೃತರಾಗಿ ಭಾರತದ ಶ್ರೇಷ್ಠ ಸಂಸ್ಕೃತಿಯ ಬಗ್ಗೆ ಅವರಿಗೆ ಜ್ಞಾನ ಹೆಚ್ಚಳವಾಗುತ್ತದೆ ಎಂದು ಹೇಳಿದರು.

ಭಾರತದ ಇತಿಹಾಸ ಮತ್ತು ಪ್ರಾಚೀನ ಗ್ರಂಥಗಳಲ್ಲಿ ಇರುವ ಮೌಲ್ಯಗಳು ಅನೇಕ ರೀತಿಯಲ್ಲಿ ಸಂವಿಧಾನದಲ್ಲಿಯೂ ಪ್ರತಿಬಿಂಬಿತವಾಗಿದೆ. ಇಂತಹ ವಿಷಯಗಳನ್ನು ಕಾನೂನು ಪಠ್ಯಕ್ರಮದಲ್ಲಿ ಸೇರಿಸಬೇಕು, ವಿಶೇಷವಾಗಿ ಕಾನೂನು ವಿದ್ಯಾರ್ಥಿಗಳಿಗೆ ಬೋಧಿಸಬೇಕು ಎಂದು ಹೇಳಿದರು.

ಕಾನೂನು ವಿದ್ಯಾರ್ಥಿಗಳು ಸಮಾಜದ ಮೂಲ ಮೌಲ್ಯ ವ್ಯವಸ್ಥೆಗಳೊಂದಿಗೆ ಸಂಪರ್ಕ ಹೊಂದಿರಬೇಕು ಮತ್ತು ಅವರು ಕಾನೂನನ್ನು ಆರಿಸಿಕೊಂಡ ಉದ್ದೇಶವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ಹೇಳಿದರು.

ನ್ಯಾಯಾಂಗ ವ್ಯವಸ್ಥೆಯ ಭಾರತೀಯೀಕರಣವು ಕೇವಲ ಕಾನೂನು ಸುಧಾರಣೆ ಮಾತ್ರವಲ್ಲ. ಭಾರತದ ಕಾನೂನು ಗುರುತನ್ನು ಮರುಸ್ಥಾಪಿಸುವ ಮಹತ್ವದ ಹೆಜ್ಜೆಯಾಗಿದೆ. ಇದರಿಂದ ನ್ಯಾಯ ಹೆಚ್ಚು ಸುಲಭವಾಗಿ ದೊರೆಯುತ್ತದೆ. ಸಾಂಸ್ಕೃತಿಕವಾಗಿಯೂ ಪ್ರಸ್ತುತವಾಗಿಸುತ್ತದೆ ಮತ್ತು ಭಾರತೀಯ ಸಮಾಜದ ಅಗತ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಹೇಳಿದರು.

Leave a Reply

Your email address will not be published. Required fields are marked *