ಪೋಕ್ಸೋ ಕೇಸ್​​ ಆರೋಪಿಯ ಬರ್ಬರ ಕೊಲೆ: ಶವ ಸಿಕ್ಕಿದ್ದು ರಾಜಕಾಲುವೆಯಲ್ಲಿ!

ಬೆಂಗಳೂರು: ಪೋಕ್ಸೋ ಕೇಸ್​​ನ ಆರೋಪಿಯನ್ನು ಬಾಲಕಿಯ ತಂದೆಯೇ ಕೊಲೆ ಮಾಡಿಸಿರುವ ಆಘಾತಕಾರಿ ಘಟನೆ ಬೆಂಗಳೂರಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೂಲದ ರಮೇಶ್ ಶ್ರೀಶೈಲ ಪಟ್ಟದಕಲ್ಮಠ (36) ಮೃತ ವ್ಯಕ್ತಿಯಾಗಿದ್ದು, ಕೊಲೆ ಬಳಿಕ ಆರೋಪಿಗಳು ಶವವನ್ನು ಯಲಹಂಕ ಸಮೀಪದ ಅಲ್ಲಾಳಸಂದ್ರ ರಾಜಕಾಲುವೆಯಲ್ಲಿ ಎಸೆದಿದ್ದರು ಎನ್ನಲಾಗಿದೆ. ಪ್ರಕರಣ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಮೇಶ್ ಬೆಂಗಳೂರಿನಲ್ಲಿ ಫುಡ್​​ ಡೆಲಿವರಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಯಲಹಂಕದ ಪೇಯಿಂಗ್ ಗೆಸ್ಟ್ ವಸತಿಗೃಹದಲ್ಲಿ ವಾಸವಾಗಿದ್ದ. ರಾಜಕಾಲುವೆಯಲ್ಲಿ ಈತನ ಶವ ಪತ್ತೆಯಾದ ಹಿನ್ನೆಲೆ, ಕುಟುಂಬಸ್ಥರಿಗೆ ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದರು. ಬಳಿಕ ಡಾ.ಬಿ.ಆರ್.ಅಂಬೇಡ್ಕರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ರಮೇಶ್​​ ಸಂಬಂಧಿಕರು, ಪೋಕ್ಸೋ ಪ್ರಕರಣದ ಬಾಲಕಿಯ ತಂದೆ ಹಾಗೂ ಇನ್ನೊಬ್ಬ ಆರೋಪಿಯಾದ ಚಿನ್ನಯ್ಯ ಎಂಬಾತನನೇ ಕೊಲೆ ಮಾಡಿರಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆ ತನಿಖೆ ನಡೆಸಿದ ಪೊಲೀಸರು ಬಾಲಕಿಯ ತಂದೆಯೊಂದಿಗೆ ಚಿನ್ನಯ್ಯ ಮಾತಪತಿ (29), ಚೇತನ ಮದಾರ (26) ಮತ್ತು ವಿನಾಯಕ ಗುರುವ (19) ಎಂಬವರನ್ನು ಬಂಧಿಸಿದ್ದಾರೆ. ರಮೇಶ್ ಹಾಗೂ ಬಾಲಕಿ ಸಂಬಂಧಿಕರಾಗಿದ್ದು, ಇಬ್ಬರ ನಡುವೆ ಪ್ರೀತಿಯ ಸಂಬಂಧ ಇತ್ತು ಎಂದು ತಿಳಿದುಬಂದಿದೆ. 2022ರಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ರಮೇಶ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಬಾಲಕಿಯನ್ನು ಶಿಕ್ಷಣಕ್ಕಾಗಿ ಪೋಷಕರು ಬೆಂಗಳೂರಿಗೆ ಕಳುಹಿಸಿದ್ದರೆ, ಜೈಲಿನಿಂದ ಬಿಡುಗಡೆಯಾದ ಬಳಿಕ ರಮೇಶ್ ಕೂಡ ಬಾಲಕಿ ಬೆಂಗಳೂರಿನಲ್ಲಿ ಇದ್ದುದನ್ನು ತಿಳಿದು ಇಲ್ಲಿ ಬಂದಿದ್ದ ಎನ್ನಲಾಗಿದೆ.

ಮಗಳ ಬಗ್ಗೆ ಆತಂಕಗೊಂಡ ತಂದೆ, ರಮೇಶ್ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಪ್ಲ್ಯಾನ್​​ ಮಾಡಿದ್ದರು. ಹೀಗಾಗಿ ತನ್ನ ಸ್ನೇಹಿತರಾದ ಚಿನ್ನಯ್ಯ, ಚೇತನ ಮತ್ತು ವಿನಾಯಕರನ್ನು ಕಾರಿನಲ್ಲಿ ಬೆಂಗಳೂರಿಗೆ ಕಳುಹಿಸಿ ರಮೇಶ್‌ನನ್ನು ಹತ್ಯೆ ಮಾಡಲು ಸೂಚನೆ ನೀಡಿದ್ದರು. ಅದರಂತೆ ಆರೋಪಿಗಳು ರಮೇಶ್‌ನ್ನು ಬಾರ್‌ಗೆ ಕರೆದುಕೊಂಡು ಹೋಗಿ, ಬಳಿಕ ಹತ್ಯೆ ಮಾಡಿದ್ದರು. ಆ ಬಳಿಕ ಅಲ್ಲಾಳಸಂದ್ರ ರಾಜಕಾಲುವೆಗೆ ಶವ ಎಸೆದಿದ್ದರು ಎಂಬುದು ಪೊಲೀಸ್​​ ತನಿಖೆ ವೇಳೆ ಗೊತ್ತಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *