ನರೇಂದ್ರ ಮೋದಿ ಅವರನ್ನು ನಾರ್ವೆ ಪ್ರವಾಸದ ವೇಳೆ ಮಾಧ್ಯಮ ಸ್ವಾತಂತ್ರ್ಯದ ಕುರಿತು ಪ್ರಶ್ನಿಸಿದ್ದ ನಾರ್ವೆಯ ಪತ್ರಕರ್ತೆ ಹೆಲ್ಲೆ ಲಿಂಗ್ ಅವರ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಖಾತೆಗಳು ಸಸ್ಪೆಂಡ್ ಆಗಿರುವ ಘಟನೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮೇ 20ರ ಬುಧವಾರ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಹೆಲೆ ಲಿಂಗ್, “ದಿನವಿಡೀ ನನ್ನ ಇನ್ಸ್ಟಾಗ್ರಾಂ ಖಾತೆಗೆ ಲಾಗಿನ್ ಆಗಲು ಪ್ರಯತ್ನಿಸಿದೆ. ಈಗ ನನ್ನ ಖಾತೆಗಳನ್ನು ಅಮಾನತುಗೊಳಿಸಲಾಗಿದೆ. ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ನಾನು ತೆತ್ತ ಸಣ್ಣ ಬೆಲೆ ಇದಾಗಿರಬಹುದು” ಎಂದು ಬರೆದುಕೊಂಡಿದ್ದಾರೆ.
ನಾರ್ವೆಯ ‘ಡಾಗ್ಸಾವಿಸೆನ್’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಹೆಲೆ ಲಿಂಗ್, ಓಸ್ಲೊದಲ್ಲಿ ನಡೆದ ಭಾರತ–ನಾರ್ವೆ ಪ್ರಧಾನಿಗಳ ಜಂಟಿ ಮಾಧ್ಯಮ ಗೋಷ್ಠಿಯಲ್ಲಿ ಪ್ರಧಾನಿ ಮೋದಿ ಅವರನ್ನು “ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತೀರಾ?” ಎಂದು ಗಟ್ಟಿಯಾಗಿ ಪ್ರಶ್ನಿಸಿದ್ದರು. ಈ ವೇಳೆ ಪ್ರಧಾನಿ ಮೋದಿ ಯಾವುದೇ ಪ್ರತಿಕ್ರಿಯೆ ನೀಡದೆ ವೇದಿಕೆಯಿಂದ ತೆರಳಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.
ಈ ಘಟನೆ ಬಳಿಕ ಹೆಲೆ ಲಿಂಗ್ ಅವರಿಗೆ ಭಾರತೀಯ ಮೂಲದ ಅನೇಕ ಟ್ರೋಲ್ ಖಾತೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೆಲವರು ಅವರನ್ನು ಬೆಂಬಲಿಸಿದ್ದರೆ, ಇನ್ನೂ ಕೆಲವರು “ವಿದೇಶಿ ಏಜೆಂಟ್” ಹಾಗೂ “ಚೀನಾ ಪರ ಪ್ರಚಾರಕಿ” ಎಂದು ಟೀಕಿಸಿದ್ದರು.
ಇದರ ಬೆನ್ನಲ್ಲೇ ಅವರ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಖಾತೆಗಳು ಸಸ್ಪೆಂಡ್ ಆಗಿರುವುದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ. “ಭಾರತೀಯ ಟ್ರೋಲ್ ಗುಂಪುಗಳು ಸಂಘಟಿತವಾಗಿ ‘ಮಾಸ್ ರಿಪೋರ್ಟ್’ ಮಾಡಿದ್ದರಿಂದಲೇ ಖಾತೆಗಳನ್ನು ಮೆಟಾ ಅಮಾನತುಗೊಳಿಸಿದೆ” ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿವೆ.
ಇನ್ನೊಂದೆಡೆ, ಭಾರತವು ಮೆಟಾ ಸಂಸ್ಥೆಗೆ ಅತಿದೊಡ್ಡ ಮಾರುಕಟ್ಟೆಯಾಗಿರುವ ಹಿನ್ನೆಲೆ ರಾಜಕೀಯ ಒತ್ತಡಕ್ಕೆ ಮಣಿದು ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಅನುಮಾನಗಳೂ ವ್ಯಕ್ತವಾಗಿವೆ.
“ಪ್ರಧಾನಿಯೊಬ್ಬರನ್ನು ಪ್ರಶ್ನಿಸಿದ್ದಕ್ಕಾಗಿಯೇ ಪತ್ರಕರ್ತೆಯ ಧ್ವನಿಯನ್ನು ಅಡಗಿಸುವುದು ಪ್ರಜಾಪ್ರಭುತ್ವ ಮತ್ತು ಮಾಧ್ಯಮ ಸ್ವಾತಂತ್ರ್ಯದ ಮೇಲಿನ ದಾಳಿ” ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
